ಗುರುವಾರ, ಜನವರಿ 28, 2016

ಇಲ್ಲಿ ಕೇಳು ಮರೀ. . .-2


     ಹೋಮ್ ವರ್ಕ್ ಮಾಡಿಕೊಂಡು ಬರಲಿಲ್ಲ ಅಂತ ನಿಮ್ಮ ಟೀಚರ್ ಬೈದಿದ್ದಕ್ಕೆ ಮುಖ ಊದಿಸಿಕೊಂಡಿದ್ದೀಯಾ? ಟೈಮೇ ಆಗಲಿಲ್ಲ ಅಂತೀಯ, ಟಿವಿ ಮುಂದೆ ಕಾರ್ಟೂನ್ ನೆಟ್ ವರ್ಕ್ ನೋಡ್ತಾ ಕೂತಿರ್ತೀಯ. ಬಾ ಇಲ್ಲಿ, ನನ್ನ ಪಕ್ಕ ಕುಳಿತುಕೋ, ನಿನಗೊಂದು ಒಳ್ಳೆಯ ಕಥೆ ಹೇಳ್ತೀನಿ. ಕಥೆ ಹೇಳಕ್ಕೆ ಮುಂಚೆ ಸಮಯ ಎಷ್ಟು ಮುಖ್ಯ ಅನ್ನುವುದರ ಬಗ್ಗೆ ಹೇಳಲಾ? ಕೇಳ್ತೀಯಾ? ಜಾಣ, ನನಗೆ ಗೊತ್ತು ನೀನು ಒಳ್ಳೆಯ ಪುಟಾಣಿ. ಒಂದು ದಿನಕ್ಕೆ ಎಷ್ಟು ಗಂಟೆ? 24 ಗಂಟೆ! ಸರಿಯಾಗಿ ಹೇಳಿದೆ. ಈ ಸಮಯ ಅನ್ನೋದು ಎಲ್ಲರಿಗೂ ಒಂದೇ! ಕೆಲವರಿಗೆ 20 ಗಂಟೆ, ಕೆಲವರಿಗೆ 30 ಗಂಟೆ ಹೀಗಿರಲ್ಲ, ಅಲ್ಲವಾ? ನಾವು ದೊಡ್ಡ ಮನುಷ್ಯರು, ಮಹಾತ್ಮರು ಅಂತೀವಲ್ಲಾ, ವಿವೇಕಾನಂದ, ಗಾಂಧೀಜಿ, ಬುದ್ಧ, ಬಸವಣ್ಣ ಅಂತಹವರಿಗೂ ಇದ್ದದ್ದು ದಿನಕ್ಕೆ 24 ಗಂಟೆ, ನಮಗೂ ಇರೋದು 24 ಗಂಟೆ! ಅವರು ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡದ್ದಕ್ಕೆ ಅವರು ದೊಡ್ಡವರಾದರು. ಸಮಯ ಬಡವರಿಗೂ ಒಂದೇ, ಶ್ರೀಮಂತರಿಗೂ ಒಂದೇ! ಅದಕ್ಕೆ ಜಾತಿ ಭೇದ ಇಲ್ಲ, ಚಿಕ್ಕವರು, ದೊಡ್ಡವರು ಅನ್ನೋದಿಲ್ಲ. 
     ಸಮಯ ಎಲ್ಲರಿಗೂ ಫ್ರೀ! ಅದಕ್ಕೆ ದುಡ್ಡು ಕೊಡಬೇಕಿಲ್ಲ. ಹಾಗಾದರೆ ಅದಕ್ಕೆ ಬೆಲೆ ಇಲ್ಲವಾ? ಇದೆ, ಅದಕ್ಕೆ ಬಹಳ ಬೆಲೆ ಇದೆ. ಅದನ್ನು ಕೊಂಡುಕೊಳ್ಳುವುದಕ್ಕೆ ಆಗುವುದಿಲ್ಲ. ಸಮಯವನ್ನು ನಾವು ಇಟ್ಟುಕೊಳ್ಳಬಹುದು, ಖರ್ಚು ಮಾಡಬಹುದು. ಆದರೆ ಒಂದು ಸಲ ಅದನ್ನು ಕಳೆದುಕೊಂಡರೆ ಮತ್ತೆ ಪಡೆಯುವುದಕ್ಕೆ ಆಗುವುದೇ ಇಲ್ಲ. ನೀನೇ ಹೇಳು, ನಿನ್ನೆಯನ್ನು ಮತ್ತೆ ಇಂದು ತರುವುದಕ್ಕೆ ಆಗುತ್ತಾ? ಇಲ್ಲೇ ಇದರ ಮಹತ್ವ ಇರೋದು. ಅದಕ್ಕೋಸ್ಕರಾನೇ ಸಮಯವನ್ನು ಹಾಳು ಮಾಡಬಾರದು. ಹಾಂ, ಸಮಯ ಕಳೆಯುತ್ತಾ, ಕಳೆಯುತ್ತಾ ನಮ್ಮ ಆಯಸ್ಸೂ ಕಳೆದುಹೋಗುತ್ತಾ ಇರುತ್ತೆ. ನಿಜ ಹೇಳಬೇಕೆಂದರೆ, ಹಾಳಾಗೋದು ನಮ್ಮ ಜೀವನವೇ ಹೊರತು ಸಮಯ ಅಲ್ಲ. ಜೀವನದಲ್ಲಿ ಮುಂದೆ ಬರಬೇಕು ಅಂದರೆ ಯಾವ ಯಾವ ಕೆಲಸವನ್ನು ಯಾವಾಗ ಮಾಡಬೇಕೋ ಆಗಲೇ ಅದನ್ನು ಸರಿಯಾಗಿ ಯೋಜನೆ ಹಾಕಿಕೊಂಡು ಮಾಡಬೇಕು. ನೀನು ದೊಡ್ಡವನಾಗುತ್ತಾ ಇದೆಲ್ಲಾ ನಿನಗೇ ಅರ್ಥ ಆಗುತ್ತೆ. ಈಗ ಇಷ್ಟು ತಿಳಿದುಕೋ, ಆಟದ ಸಮಯದಲ್ಲಿ ಆಟ, ಪಾಠದ ಸಮಯದಲ್ಲಿ ಪಾಠ, ಊಟದ ಸಮಯದಲ್ಲಿ ಊಟ ಮತ್ತು ನೋಟದ ಸಮಯದಲ್ಲಿ ನೋಟ ಇದ್ದರೆ ನೀನೇ ಲೀಡರ್ ಅಗ್ತೀಯ! 
     ಎಷ್ಟು ಜಾಣ ಪುಟಾಣೀನೋ ನೀನು, ಹೇಳದೇ ಇದ್ದರೂ ಟಿವಿನ ನೀನೇ ಆಫ್ ಮಾಡಿಬಿಟ್ಟೆಯಲ್ಲಾ! ಹೋಗು, ನಾಳೆಯ ಹೋಮ್ ವರ್ಕ್ ಏನು ಮಾಡಬೇಕು, ತೆಗೆದುಕೊಂಡು ಬಾ, ಮಾಡುವಂತೆ. ಇವತ್ತು ಬೈದ ಟೀಚರ್ ನಾಳೆ ನಿನಗೆ ಭೇಷ್ ಅಂದೇ ಅನ್ನುತ್ತಾರೆ.
ನಿನ್ನ ಪ್ರೀತಿಯ ಮಾಮ,
                                                                      ಕ.ವೆಂ.ನಾ.


ಮಂಗಳವಾರ, ಜನವರಿ 26, 2016

ಇಲ್ಲಿ ಕೇಳು ಮರೀ . . .-1



     ಸುಮಾರು 1500 ವರ್ಷಗಳ ಹಿಂದೆ ಭಾರವಿ ಅನ್ನುವ ಒಬ್ಬ ದೊಡ್ಡ ವಿದ್ವಾಂಸ ಇದ್ದ. 'ಕಿರಾತಾರ್ಜುನೀಯ' ಎಂಬ ಪ್ರಸಿದ್ಧ ಸಂಸ್ಕೃತ ಕಾವ್ಯ ರಚಿಸಿದ್ದವನು. ಅವನ ಬಗ್ಗೆ ಒಂದು ಕಥೆಯಿದೆ, ಕೇಳು.  ಅವನು ಚಿಕ್ಕವನಾಗಿದ್ದಾಗ ಅವನ ಅಪ್ಪ-ಅಮ್ಮ ಉಪನಯನ ಮಾಡಿ ಗುರುಕುಲಕ್ಕೆ ವಿದ್ಯಾಭ್ಯಾಸಕ್ಕೆ ಕಳಿಸಿದ್ದರು. ಗುರುಗಳಿಂದ ಎಲ್ಲಾ ವಿದ್ಯೆಗಳಲ್ಲೂ ಪಂಡಿತನಾಗಿ ವಾಪಸು ಬಂದಾಗ ಅವನ ಪಾಂಡಿತ್ಯ, ಕವಿತೆ ಬರೆಯುವ ಸಾಮರ್ಥ್ಯ ಕಂಡು ಊರವರೆಲ್ಲಾ ಅವನನ್ನು ಮೆಚ್ಚಿದ್ದರು. ಎಲ್ಲರೂ ಹೊಗಳುವವರೇ! ಎಲ್ಲರೂ ಹೊಗಳುತ್ತಿದ್ದರೂ ಭಾರವಿಯ ಅಪ್ಪ ಮಾತ್ರ ಸುಮ್ಮನಿರುತ್ತಿದ್ದರು. ಭಾರವಿಗೆ ಅಪ್ಪನಿಂದಲೂ ಹೊಗಳಿಸಿಕೊಳ್ಳಬೇಕು ಅಂತ ಆಸೆ. ಏನೇನೋ ಉಪಾಯ ಮಾಡಿ ಬರೆದಿದ್ದೆಲ್ಲವನ್ನೂ ಅಪ್ಪನ ಮುಂದೆ ಒಪ್ಪಿಸುತ್ತಿದ್ದ. ಎಲ್ಲಾ ಕೇಳುತ್ತಿದ್ದ ಅಪ್ಪ, 'ಇದೇನು ಮಹಾ, ಇನ್ನೂ ಚೆನ್ನಾಗಿ ಬರೆಯಬಹುದಿತ್ತು' ಎಂದುಬಿಡುತ್ತಿದ್ದ. ಹೀಗೆ ಅನೇಕ ಸಲ ಆಯಿತು. ಇಡೀ ಊರೇ ತನ್ನನ್ನು ಹೊಗಳುತ್ತಿದ್ದರೂ ಅಪ್ಪ ಮಾತ್ರ ಹಂಗಿಸುವುದನ್ನು ಕಂಡು ಕ್ರಮೇಣ ಭಾರವಿಗೆ ಅಪ್ಪನ ಮೇಲೆ ಸಿಟ್ಟು ಹೆಚ್ಚಾಗುತ್ತಾ ಹೋಯಿತು. ಇದು ಎಷ್ಟರ ಮಟ್ಟಿಗೆ ಹೋಯಿತು ಅಂದರೆ ಭಾರವಿ ಅಪ್ಪನನ್ನು ಕೊಂದೇಬಿಡಬೇಕು ಅಂದುಕೊಂಡ. ಒಂದು ರಾತ್ರಿ ಊಟ ಆದ ಮೇಲೆ ಅಟ್ಟದ ಮೇಲೆ ಕುಳಿತು ಅಪ್ಪ-ಅಮ್ಮ ಊಟ ಮಾಡಿ ಮಲಗುವುದನ್ನೇ ಕಾಯುತ್ತಿದ್ದ. ನಿದ್ದೆ ಮಾಡಿದ ಸಮಯದಲ್ಲಿ ಅಪ್ಪನನ್ನು ಕೊಲ್ಲಬೇಕು ಎಂಬುದು ಅವನ ಯೋಜನೆ. ಅಕಸ್ಮಾತ್ತಾಗಿ ಅವನಿಗೆ ಹತ್ತಿರದಲ್ಲಿದ್ದ ಒಂದು ತಾಳೆಗರಿ ಕಂಡಿತು. ಅದರಲ್ಲಿ, 'ಏನಾದರೂ ಕೆಟ್ಟ ಕೆಲಸ ಮಾಡಬೇಕಾದರೆ ಸಾವಿರ ಸಲ ಯೋಚಿಸು' ಎಂದು ಬರೆದಿತ್ತು. ಅಷ್ಟುಹೊತ್ತಿಗೆ ಅಪ್ಪ-ಅಮ್ಮ ಊಟ ಮುಗಿಸಿ ಎಲೆ-ಅಡಿಕೆ ಹಾಕಿಕೊಳ್ಳುತ್ತಾ ಮಾತನಾಡುತ್ತಿದ್ದುದನ್ನು ಭಾರವಿ ಕದ್ದು ಕೇಳಿಸಿಕೊಳ್ಳುತ್ತಿದ್ದ. ಅಮ್ಮ ಹೇಳುತ್ತಿದ್ದಳು, "ಭಾರವಿ ಅಷ್ಟೊಂದು ಬುದ್ಧಿವಂತ. ಎಲ್ಲರೂ ಅವನನ್ನು ಮೆಚ್ಚುತ್ತಾರೆ. ನೀವು ಮಾತ್ರ ಅವನನ್ನು ಮೂದಲಿಸುತ್ತಲೇ ಇರುತ್ತೀರಿ. ಅವನು ಬಹಳ ಬೇಜಾರು ಮಾಡಿಕೊಂಡಿದಾನೆ." ಅದಕ್ಕೆ ಅಪ್ಪ, "ನನಗೆ ಗೊತ್ತು, ಅವನು ತುಂಬಾ ಜಾಣ. ಅವನನ್ನು ಹೊಗಳಿದರೆ ತೃಪ್ತಿ ಆಗಿ ಸುಮ್ಮನಿದ್ದುಬಿಡ್ತಾನೆ. ನಾನು ಹೀಗೆ ಮಾಡಿದರೆ ಅವನು ಇನ್ನೂ ಹೆಚ್ಚು ಸಾಧನೆ ಮಾಡಿ ಇನ್ನೂ ಮುಂದೆ ಬರುತ್ತಾನೆ. ಅದೇ ನನ್ನ ಆಸೆ." ಇದನ್ನು ಕೇಳಿ ಭಾರವಿಗೆ ಅಳು ಬಂದುಬಿಟ್ಟಿತು. ಕೆಳಗೆ ಬಂದವನೇ ತನ್ನ ತಪ್ಪನ್ನು ಒಪ್ಪಿಕೊಂಡು ಅಪ್ಪನ ಕಾಲು ಹಿಡಿದು ಕ್ಷಮೆ ಕೇಳಿದ. ಮುಂದೆ ಅಪ್ಪ-ಅಮ್ಮರಿಗೆ ವಿಧೇಯನಾಗಿ ಹೆಚ್ಚಿನ ಸಾಧನೆ ಮಾಡಿ ಜಗತ್ಪ್ರಸಿದ್ಧನಾದ.
     ನೋಡು, ನಿನಗೆ ಅಪ್ಪನೋ, ಅಮ್ಮನೋ, ಗುರುಗಳೋ, ಹಿರಿಯರೋ ಏನಕ್ಕಾದರೂ ಬೈದರೆ ಸಿಟ್ಟು ಮಾಡಿಕೋಬೇಡ. ಅವರು ಬೈಯುವುದು ನಿನಗೆ ಒಳ್ಳೆಯದಾಗಲಿ ಅಂತಲೇ ಹೊರತು ಮತ್ತೇನೂ ಅಲ್ಲ. ಹೌದೋ ಅಲ್ಲವೋ?
                                                       ನಿನ್ನ ಪ್ರೀತಿಯ ಮಾಮ,
                                                                        ಕ.ವೆಂ.ನಾ.


ಗುರುವಾರ, ಜುಲೈ 23, 2015

ಗುರುವಾರ, ಜೂನ್ 5, 2014

Photos of 'Bala shibira' conducted at Hassan - ಹಾಸನದಲ್ಲಿ ನಡೆದ ಬಾಲಶಿಬಿರ

                                ಮಕ್ಕಳಿಗೆ ಅಗ್ನಿಹೋತ್ರದ ಪರಿಚಯ ಮತ್ತು ಪ್ರಾತ್ಯಕ್ಷಿಕೆ

                                     ಹಿರಿಯರೂ ಉತ್ಸಾಹದಿಂದ ವೀಕ್ಷಿಸುತ್ತಿರುವುದು


                           ಸಮಾರೋಪ ಸಮಾರಂಭ - ಸ್ವಾಗತ ಶ್ರೀ ಜಗದೀಶರಿಂದ


                                     ಭಾರತ ಮಾತಾ ಪೂಜನ - ಗಣ್ಯರಿಂದ

    ಗೋಶಾಲೆ ನಡೆಸುತ್ತಿರುವ ಶ್ರೀಮತಿ ಸ್ವರೂಪರಾಣಿಯವರಿಗೆ ವೇದಭಾರತಿ ವತಿಯಿಂದ ನಿಧಿ ನೀಡಿಕೆ

                                         ಪ್ರಾಸ್ತಾವಿಕ ನುಡಿ - ಹರಿಹರಪುರ ಶ್ರೀಧರರಿಂದ
                ಭರಮಸಾಗರದ ಶ್ರೀ ಬ್ರಹ್ಮಾನಂದ ಭಿಕ್ಷುರವರಿಂದ ಮಕ್ಕಳಿಗೆ ಭಗವದ್ಗೀತಾ ಪಾಠ

                                             ಮಕ್ಕಳಿಂದ ಭಾರತಮಾತಾ ಪೂಜನ

                                       ಶಿಬಿರದ ಕುರಿತು ಮಕ್ಕಳ ಅನುಭವ ಕಥನ

                                ಮುಖ್ಯ ಅತಿಥಿ ಶ್ರೀ ಸಿ ಎಸ್ ಕೃಷ್ಣ ಸ್ವಾಮಿಯವರ ನುಡಿ
                                   ಡಾ. ಸಾವಿತ್ರಿರವರಿಂದ ಮಕ್ಕಳಿಗೆ ಕಿವಿಮಾತು
                          ವೇದಭಾರತಿ ಅಧ್ಯಕ್ಷ ಶ್ರೀ ಕವಿನಾಗರಾಜರಿಂದ ಅಧ್ಯಕ್ಷರ ನುಡಿ

ಶನಿವಾರ, ಮೇ 31, 2014

ಭೂಮಿ ಹುಟ್ಟಿದ್ದು ಹೇಗೆ?

ಹಾಸನದ ವೇದಭಾರತಿ ಆಶ್ರಯದಲ್ಲಿ 10.5.2014ರಿಂದ14.5.2014ರವರೆಗೆ ನಡೆದ ಬಾಲಶಿಬಿರದಲ್ಲಿ ಮಕ್ಕಳಿಗೆ ವೇದಾಭ್ಯಾಸದಲ್ಲಿ ಆಸಕ್ತಿ ಮೂಡಿಸುವುದರೊಂದಿಗೆ ಆಟ, ಹಾಡುಗಳೊಂದಿಗೆ ಕ್ಲಿಷ್ಟ ವಿಷಯಗಳನ್ನು ಸರಳವಾಗಿ ತಿಳಿಸಲಾಯಿತು. ಅಂತಹ ಒಂದು ಚೇತೋಹಾರಿ ಚಟುವಟಿಕೆಯ ವಿಡಿಯೋ ಇದು: