ಗುರುವಾರ, ಜನವರಿ 28, 2016

ಇಲ್ಲಿ ಕೇಳು ಮರೀ. . .-2


     ಹೋಮ್ ವರ್ಕ್ ಮಾಡಿಕೊಂಡು ಬರಲಿಲ್ಲ ಅಂತ ನಿಮ್ಮ ಟೀಚರ್ ಬೈದಿದ್ದಕ್ಕೆ ಮುಖ ಊದಿಸಿಕೊಂಡಿದ್ದೀಯಾ? ಟೈಮೇ ಆಗಲಿಲ್ಲ ಅಂತೀಯ, ಟಿವಿ ಮುಂದೆ ಕಾರ್ಟೂನ್ ನೆಟ್ ವರ್ಕ್ ನೋಡ್ತಾ ಕೂತಿರ್ತೀಯ. ಬಾ ಇಲ್ಲಿ, ನನ್ನ ಪಕ್ಕ ಕುಳಿತುಕೋ, ನಿನಗೊಂದು ಒಳ್ಳೆಯ ಕಥೆ ಹೇಳ್ತೀನಿ. ಕಥೆ ಹೇಳಕ್ಕೆ ಮುಂಚೆ ಸಮಯ ಎಷ್ಟು ಮುಖ್ಯ ಅನ್ನುವುದರ ಬಗ್ಗೆ ಹೇಳಲಾ? ಕೇಳ್ತೀಯಾ? ಜಾಣ, ನನಗೆ ಗೊತ್ತು ನೀನು ಒಳ್ಳೆಯ ಪುಟಾಣಿ. ಒಂದು ದಿನಕ್ಕೆ ಎಷ್ಟು ಗಂಟೆ? 24 ಗಂಟೆ! ಸರಿಯಾಗಿ ಹೇಳಿದೆ. ಈ ಸಮಯ ಅನ್ನೋದು ಎಲ್ಲರಿಗೂ ಒಂದೇ! ಕೆಲವರಿಗೆ 20 ಗಂಟೆ, ಕೆಲವರಿಗೆ 30 ಗಂಟೆ ಹೀಗಿರಲ್ಲ, ಅಲ್ಲವಾ? ನಾವು ದೊಡ್ಡ ಮನುಷ್ಯರು, ಮಹಾತ್ಮರು ಅಂತೀವಲ್ಲಾ, ವಿವೇಕಾನಂದ, ಗಾಂಧೀಜಿ, ಬುದ್ಧ, ಬಸವಣ್ಣ ಅಂತಹವರಿಗೂ ಇದ್ದದ್ದು ದಿನಕ್ಕೆ 24 ಗಂಟೆ, ನಮಗೂ ಇರೋದು 24 ಗಂಟೆ! ಅವರು ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡದ್ದಕ್ಕೆ ಅವರು ದೊಡ್ಡವರಾದರು. ಸಮಯ ಬಡವರಿಗೂ ಒಂದೇ, ಶ್ರೀಮಂತರಿಗೂ ಒಂದೇ! ಅದಕ್ಕೆ ಜಾತಿ ಭೇದ ಇಲ್ಲ, ಚಿಕ್ಕವರು, ದೊಡ್ಡವರು ಅನ್ನೋದಿಲ್ಲ. 
     ಸಮಯ ಎಲ್ಲರಿಗೂ ಫ್ರೀ! ಅದಕ್ಕೆ ದುಡ್ಡು ಕೊಡಬೇಕಿಲ್ಲ. ಹಾಗಾದರೆ ಅದಕ್ಕೆ ಬೆಲೆ ಇಲ್ಲವಾ? ಇದೆ, ಅದಕ್ಕೆ ಬಹಳ ಬೆಲೆ ಇದೆ. ಅದನ್ನು ಕೊಂಡುಕೊಳ್ಳುವುದಕ್ಕೆ ಆಗುವುದಿಲ್ಲ. ಸಮಯವನ್ನು ನಾವು ಇಟ್ಟುಕೊಳ್ಳಬಹುದು, ಖರ್ಚು ಮಾಡಬಹುದು. ಆದರೆ ಒಂದು ಸಲ ಅದನ್ನು ಕಳೆದುಕೊಂಡರೆ ಮತ್ತೆ ಪಡೆಯುವುದಕ್ಕೆ ಆಗುವುದೇ ಇಲ್ಲ. ನೀನೇ ಹೇಳು, ನಿನ್ನೆಯನ್ನು ಮತ್ತೆ ಇಂದು ತರುವುದಕ್ಕೆ ಆಗುತ್ತಾ? ಇಲ್ಲೇ ಇದರ ಮಹತ್ವ ಇರೋದು. ಅದಕ್ಕೋಸ್ಕರಾನೇ ಸಮಯವನ್ನು ಹಾಳು ಮಾಡಬಾರದು. ಹಾಂ, ಸಮಯ ಕಳೆಯುತ್ತಾ, ಕಳೆಯುತ್ತಾ ನಮ್ಮ ಆಯಸ್ಸೂ ಕಳೆದುಹೋಗುತ್ತಾ ಇರುತ್ತೆ. ನಿಜ ಹೇಳಬೇಕೆಂದರೆ, ಹಾಳಾಗೋದು ನಮ್ಮ ಜೀವನವೇ ಹೊರತು ಸಮಯ ಅಲ್ಲ. ಜೀವನದಲ್ಲಿ ಮುಂದೆ ಬರಬೇಕು ಅಂದರೆ ಯಾವ ಯಾವ ಕೆಲಸವನ್ನು ಯಾವಾಗ ಮಾಡಬೇಕೋ ಆಗಲೇ ಅದನ್ನು ಸರಿಯಾಗಿ ಯೋಜನೆ ಹಾಕಿಕೊಂಡು ಮಾಡಬೇಕು. ನೀನು ದೊಡ್ಡವನಾಗುತ್ತಾ ಇದೆಲ್ಲಾ ನಿನಗೇ ಅರ್ಥ ಆಗುತ್ತೆ. ಈಗ ಇಷ್ಟು ತಿಳಿದುಕೋ, ಆಟದ ಸಮಯದಲ್ಲಿ ಆಟ, ಪಾಠದ ಸಮಯದಲ್ಲಿ ಪಾಠ, ಊಟದ ಸಮಯದಲ್ಲಿ ಊಟ ಮತ್ತು ನೋಟದ ಸಮಯದಲ್ಲಿ ನೋಟ ಇದ್ದರೆ ನೀನೇ ಲೀಡರ್ ಅಗ್ತೀಯ! 
     ಎಷ್ಟು ಜಾಣ ಪುಟಾಣೀನೋ ನೀನು, ಹೇಳದೇ ಇದ್ದರೂ ಟಿವಿನ ನೀನೇ ಆಫ್ ಮಾಡಿಬಿಟ್ಟೆಯಲ್ಲಾ! ಹೋಗು, ನಾಳೆಯ ಹೋಮ್ ವರ್ಕ್ ಏನು ಮಾಡಬೇಕು, ತೆಗೆದುಕೊಂಡು ಬಾ, ಮಾಡುವಂತೆ. ಇವತ್ತು ಬೈದ ಟೀಚರ್ ನಾಳೆ ನಿನಗೆ ಭೇಷ್ ಅಂದೇ ಅನ್ನುತ್ತಾರೆ.
ನಿನ್ನ ಪ್ರೀತಿಯ ಮಾಮ,
                                                                      ಕ.ವೆಂ.ನಾ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ